ಧರ್ಮಕೇಂದ್ರದ ಇತಿಹಾಸ
ಸಂತ ಜೋಸೆಫರ ಧರ್ಮಕೇಂದ್ರ 1944 ರಲ್ಲಿ ಸುಮಾರು 30-40ಕುಟುಂಬಗಳೊಂದಿಗೆ ಪ್ರಾರಂಭವಾಯಿತು. ರೆ. ಫಾ. ಎ. ಫೆರ್ನಾಂಡಿಸ್ ರವರು ಮೈಸೂರಿನಿಂದ ತಿಂಗಳಿಗೊಮ್ಮೆ ಬಂದು ಆಧ್ಯಾತ್ಮಿಕ ಸಹಾಯವನ್ನು ನೀಡುತ್ತಿದ್ದರು.
ಸುಮಾರು 1944ಕ್ಕೂ ಮುಂಚೆ ತಮಿಳುನಾಡು, ಕೇರಳ, ಆಗಿನ ಆಂಧ್ರಪ್ರದೇಶ ಮತ್ತು ಕರ್ನಾಟಕದ ಇತರ ಭಾಗಗಳಿಂದ ಕೆಲಸಕ್ಕಾಗಿ ಬಂದ ಅನೇಕ ಕ್ರೈಸ್ತ ಕುಟುಂಬಗಳು ಇಲ್ಲಿ ನೆಲೆಸಿದವು. ಸಕ್ಕರೆ ಕಾರ್ಖಾನೆಯಲ್ಲಿಯೂ, ಇತರ ಕೆಲಸಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡ ಇವರಿಗೆ ಆಧ್ಯಾತ್ಮಿಕ ಸೇವೆಯನ್ನು ನೀಡಲು ಪಾಂಡವಪುರದಿಂದ ತಿಂಗಳಿಗೊಮ್ಮೆ ಅಥವಾ ಸಾಧ್ಯವಾದಾಗ ಗುರುಗಳು ಬರುತ್ತಿದ್ದರು. ಇಂದಿಗೂ ಕಾರ್ಖಾನೆಯ ಸುತ್ತಮುತ್ತಲಲ್ಲಿರುವ ಕ್ರೈಸ್ತ ಕುಟುಂಬಗಳು ಇದಕ್ಕೆ ಸಾಕ್ಷಿಯಾಗಿವೆ. ಇದೇ ಸಮಯದಲ್ಲಿ ಕಾರ್ಮೆಲೈಟ್ ಸಿಸ್ಟರ್ಸ್ ಆಫ಼್ ಸೈಂಟ್ ತೆರೇಸಾ ಸಭೆಯ ಭಗಿನಿಯರು ಜನಸೇವೆಗಾಗಿ ಧರ್ಮಕೇಂದ್ರದಲ್ಲಿ ಒಂದು ಕನ್ಯಾಸ್ತ್ರೀಯರ ನಿವಾಸವನ್ನು ಮತ್ತು ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆದರು.
ಕ್ರೈಸ್ತರ ಸಂಖ್ಯೆ ಹೆಚ್ಚಾದಂತೆ ಮತ್ತು ಕನ್ಯಾಸ್ತ್ರೀಯರು ನೆಲೆಸಿದುದರಿಂದ ಗುರುಗಳು ಕೆಲ ಸಮಯ ಈಗಿನ ಅಶೋಕನಗರದ ಬಾಡಿಗೆ ಕಟ್ಟಡವೊಂದರಲ್ಲಿದ್ದ ಕಾನ್ವೆಂಟ್ನಲ್ಲಿ ಬಲಿಪೂಜೆಯರ್ಪಿಸುವ ವ್ಯವಸ್ಥೆ ಮಾಡಲಾಯಿತು. 1946 ರಲ್ಲಿ ಸಂತ ಜೋಸೆಫರ (ಈಗಿನ ಹಳೆಯ) ದೇವಾಲಯಕ್ಕೆ ಆಗಿನ ಧರ್ಮಾಧ್ಯಕ್ಷರಾದ ಡಾ. ರೆನೆ ಫ್ಯೂಗ ರವರು ಅಡಿಪಾಯವನ್ನು ಹಾಕಿದರು. ನಂತರ, 1962 ರಲ್ಲಿ ದೇವಾಲಯವು ಸಂಪೂರ್ಣಗೊಂಡು ಆಶೀರ್ವದಿಸಲ್ಪಟ್ಟಿತು. ಬರುವ ದಿನಗಳಲ್ಲಿ ಭಕ್ತಾಧಿಗಳ ಸಂಖ್ಯೆ ಅಧಿಕಗೊಂಡಂತೆ ಬಲಿಪೂಜೆಗೆ ಸ್ಥಳಾವಕಾಶವು ಸಾಲದೆ ಹೋದುದ್ದನ್ನು ಮನಗಂಡು ಫಾ. ಆರ್. ಎಂ. ಕೊಲಾಸೋರವರು ಆಗಿನ ಧರ್ಮಾಧ್ಯಕ್ಷರಾದ ಡಾ. ಜೋಸೆಫ್ ರಾಯ್ ರವರ ಅನುಮತಿಯೊಂದಿಗೆ ಹೊಸ ದೇವಾಲಯ ಕಟ್ಟುವ ಕೆಲಸಕ್ಕೆ ಚಾಲನೆ ನೀಡಿದರು. ನಂತರ ಬಂದ ಫಾ. ಡೆನ್ನಿಸ್ ನೊರೋನಾರವರು ಅಗಸ್ಟ್ 16, 2003 ರಂದು ನಿರ್ಮಾಣ ಕಾರ್ಯವನ್ನು ಮುಗಿಸಿದರು. ಆಗಿನ ಧರ್ಮಾಧ್ಯಕ್ಷರಾದ ಡಾ. ತೋಮಾಸ್ ವಾಳಪಳ್ಳಿಯವರು ಈಗಿನ ನೂತನ ದೇವಾಲಯವನ್ನು ಅಭಿಷೇಕಿಸಿ ಆಶೀರ್ವದಿಸಿದರು.